Saturday, February 4, 2017

ಸೂರ್ಯೋಪಾಸನೆಯಿಂದ ಶಾರೀರಿಕ ಬಲಸಂವರ್ಧನೆ, ಮಾನಸಿಕ ಪ್ರಸನ್ನತೆ ಉಂಟಾಗುತ್ತದೆ. 

                              - ಡಾ|| ರಾಘವೇಂದ್ರ ಗುರೂಜಿ



ದಾವಣಗೆರೆ. ಫೆ, 3

ಮಾಘ ಮಾಸ ಶುಕ್ಲ ಪಕ್ಷದ ಸಪ್ತಮೀ ದಿನದಂದು ಆಚರಿಸುವ ರಥಸಪ್ತಮಿ ವೇದಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಸೂರ್ಯೋಪಾಸನೆಯ ಹಬ್ಬವಾಗಿದ್ಗು ಇದರಿಂದ ಶಾರೀರಿಕ ಬಲಸಂವರ್ಧನೆ ಮತ್ತು ಮಾನಸಿಕ ಪ್ರಸನ್ನತೆ ಉಂಟಾಗಿ, ಉಲ್ಲಾಸ, ಉತ್ಸಾಹಗಳು ಮನಸ್ಸಿಗಾಗುತ್ತದೆ ಎಂದು ಯೋಗಗುರು  ಡಾ|| ರಾಘವೇಂದ್ರ ಗುರೂಜಿ ತಿಳಿಸಿದರು.

ಅವರು ಇಂದು ಬೆಳಿಗ್ಗೆ, ನಗರದ ದೇವರಾಜ ಅರಸ್ ಬಡಾವಣೆಯ, ಸಿ'ಬ್ಲಾಕ ನಲ್ಲಿರುವ, ಆದರ್ಶ ಯೋಗ ಪ್ರತಿಷ್ಠಾನ (ರಿ)  ಅಡಿಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಶ್ರೀ ಮಹಾಮಾಯಿ ವಿಶ್ವಯೋಗಮಂದಿರ ಹಾಗು ಯೋಗತಚಿಕಿತ್ಸಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ, ರಥಸಪ್ತಮಿ-ಸೂರ್ಯೋಪಾಸನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿಗರು.

ಸೂರ್ಯ ಆರೋಗ್ಯದಾತ ಆದ್ದರಿಂದ ಅವನನ್ನು "ಆರೋಗ್ಯಂ ಭಾಸ್ಕರಾಧಿಚ್ಚೇತ್" ಎಂದು ಪ್ರಾರ್ಥಿಸಿದೆ, ದಿನಂಪ್ರತಿ ಸೂರ್ಯನಮಸ್ಕಾರ ಮಾಡುವುದರಿಂದ ಸರ್ವರೋಗ ನಿವಾರಣೆಯಾಗಿ ಆಯುಷ್ಯವು ವೃದ್ಧಿ ಯಾಗುತ್ತದೆ, ಪ್ರತಿದಿನ ತಪ್ಪದೇ, 108 ಸೂರ್ಯನಮಸ್ಕಾರವನ್ನು ಮಾಡುತಿದ್ದ ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿಯವರು 106 ವರ್ಷ ಬದುಕಿ ತೋರಿಸಿದ ನಿದರ್ಶನವು ಇದಕ್ಕೆ ಸಾಕ್ಷಿ ಎಂದರು.

ರಥಸಪ್ತಮಿ ದಿನದಂದು ತಮ್ಮ ತಮ್ಮ ಮನೆಗಳಲ್ಲಿ ಹಾಲು ಉಕ್ಕಿಸುವುದರಿಂದ ಮನೆಯ ಉತ್ತರೋತ್ತರ ಅಭೀವೃದ್ಧಿ ಅಗಲಿದೆ ಎಂದು ತಿಳಿಸುತ್ತಾ ರಥಸಪ್ತಮಿಯ ವಿಶೇಷತೆಯನ್ನು ಸರಳವಾಗಿ ತಿಳಿಸಿದರು.

ಅಬಾಲವೃದ್ಧರಾದಿಯಾಗಿ ನೆರೆದಿದ್ದ ನೂರಕ್ಕೂ ಹೆಚ್ಚು ಯೋಗಸಾಧಕರು ಶತನಾಮಾವಳಿಗಳೊಂದಿಗೆ 108 ಸುತ್ತಿನ ಸೂರ್ಯನಮಸ್ಕಾರ ಯೋಗಪದ್ದತಿಯನ್ನು ಪ್ರದರ್ಶಿಸಿ ಶ್ರೀಸೂರ್ಯನಾರಾಯಣನ ಕೃಪೆಗೆ ಪಾತ್ರರಾದರು, ಹೂವಿನ ಅಲಂಕಾರ ಸೇವೆಯನ್ನು ಹರಿಹರದ‌ ಕಾರ್ಯಪಾಲಕ ಅಭಿಯಂತರರಾದ  ಲಕ್ಷ್ಮಣ್ ಹೆಚ್, ಪ್ರಸಾದ ಸೇವೆಯನ್ನು ಪತಂಜಲಿ ಯೋಗಪೀಠದ ರೂವಾರಿ ಮಾಧವ ರಾವ್ ಏಕಭೋಟೆಯವರು ಅರ್ಪಿಸಿದರು, ರಾಹುಲ್ ವಿ.ಕೆ, ಅನೀಲ್ ಕುಮಾರ್ ರಾಯ್ಕರ್, ಬಾಳೆ ಎಲೆ ವ್ಯಾಪಾರಿ ರುದ್ರೆಶ್ ಪಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಜಿ.ಪಂ, ಅಭಿಯಂತರುಗಳಾದ ಜಿ. ಪರಮೇಶ್ವರಪ್ಪ, ಬಿ.ಸಿ. ಪುರುಷೋತ್ತಮ,  ಜೆ. ಮಲ್ಲೆಶಪ್ಪ, ಬಿ. ಪುಟ್ಟಸ್ವಾಮಿ ಹಾಗು ವ್ಯಾಪಾರಿ ರಾಜೂ ಕಡೆಕೊಪ್ಪ ಇನ್ನಿತರರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಕಾರ್ಯಕ್ರಮದ ಕೊನೆಯಲ್ಲಿ ಮಂಗಳಾರತಿ, ಶಾಂತಿಮಂತ್ರ, ಪ್ರಸಾದ ವಿನಿಯೋಗದೊಂದಿಗೆ ಸಂಪನ್ನಗೊಂಡಿತು.


Monday, September 19, 2016

ಶ್ರೀಮತಿ ಹೆಚ್ ಗೌರಮ್ಮ ಇವರಿಗೆ ಗೌರವ ಸಮರ್ಪಣೆ

ಮಹಾನಗರ ಪಾಲಿಕೆ 9ನೇ ವಾರ್ಡ್ ಸದಸ್ಯರಾದ ಶ್ರೀಮತಿ ಹೆಚ್ ಗೌರಮ್ಮ ಇವರಿಗೆ ಗೌರವ ಸಮರ್ಪಣೆ

ದಾವಣಗೆರೆ ಸೆ.12 

ಆದರ್ಶ ಯೋಗ ಪ್ರತಿಷ್ಠಾನ (ರಿ.) ದಾವಣಗೆರೆ ವತಿಯಿಂದ ಇತ್ತೀಚೆಗೆ ನಗರದ ದೇವರಾಜ ಅರಸ್ ಬಡಾವಣೆಯ ಸಿ ಬ್ಲಾಕ್ ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಮಾಯಿ ವಿಶ್ವ ಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರ ದ ಲೋಕಾರ್ಪಣಾಾ ಸಮಾರಂಭದ ಸುಸಂದರ್ಭದಲ್ಲಿ ಮಹಾನಗರ ಪಾಲಿಕೆಯ 9ನೇ ವಾರ್ಡ್ ನ ಸದಸ್ಯರಾದ ಶ್ರೀಮತಿ ಹೆಚ್. ಗೌರಮ್ಮ ಹಾಗೂ ವರ್ತಕ ಹೆಚ್. ಎನ್ ಚಂದ್ರಪ್ಪ ಇವರನ್ನು  ವಾರ್ಡ್ ನ ಸರ್ವ ನಾಗರಿಕರ ಪರವಾಗಿ ಸನ್ಮಾನಿಸಿ ಗೌರವ ಸಮರ್ಪಣೆ ಅರ್ಪಿಸಲಾಯಿತು, ಸಮಾರಂಭದಲ್ಲಿ ಶ್ರೀಕ್ಷೇತ್ರ ಆವರಗೊಳ್ಳ ಪುರವರ್ಗದ ಪೂಜ್ಯ ಶ್ರೀ ಷ|| ಬ್ರ|| ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು, ಶಿವಯೋಗಶ್ರಮ ವಿರಕ್ತಮಠದ ಪೂಜ್ಯ ಶ್ರೀ ಬಸವಪ್ರಭು ಮಹಾಸ್ವಾಮಿಗಳು, ಮೈಸೂರಿನ ಗೋ ಸಾಯಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ಪೂಜ್ಯ ಶ್ರೀ ನಾರಾಯಣ ಸ್ವಾಮೀಜಿ , ಪುತ್ತೂರಿನ ಹಿರಿಯ ಯೋಗ ಚಿಕಿತ್ಸಾ ತಜ್ಞ ಕರುಣಾಕರ್ ಜೀ, ಪಾಲಿಕೆಯ ಸದಸ್ಯ ದಿನೇಶ್  ಕೆ ಶೆಟ್ಟಿ, ಹಿರಿಯ ನ್ಯಾಯವಾದಿ ಎ.ಎಂ ಹೆಗ್ಡೆ, ಸನ್ನದು ಲೆಕ್ಕ ಪರಿಶೋಧಕ ಎನ್.ಜಿ. ಗಿರೀಶ್ ನಾಡಿಗ್, ಪ್ರತಿಷ್ಠಾನದ ಯೋಗಗುರು ಡಾ|| ರಾಘವೇಂದ್ರ ಗುರೂಜಿ ಇನ್ನಿತರರು ಉಪಸ್ಥಿತರಿದ್ದರು.

ಯೋಗ ಫ್ಯಾಷನ್‍ಗಾಗಿ ಅಲ್ಲ ಇದೊಂದು ನಿತ್ಯಾನುಷ್ಠಾನ ಕಲೆ

ಯೋಗ ಫ್ಯಾಷನ್‍ಗಾಗಿ ಅಲ್ಲ ಇದೊಂದು ನಿತ್ಯಾನುಷ್ಠಾನ ಕಲೆ.
ಪೂಜ್ಯಶ್ರೀ ಕರುಣಾಕರ ಜೀ.
ದಾವಣಗೆರೆ.ಸೆ.5.

ಮನುಷ್ಯನಿಗೆ ಆಹಾರ, ನೀರು, ಗಾಳಿ ಎಷ್ಟು ಮುಖ್ಯವೋ ಅಷ್ಠೇ ಮುಖ್ಯ ಶರೀರದ ಆರೋಗ್ಯ, ಆರೋಗ್ಯವಿದ್ದರೆ ಸದಾ ಆನಂದವಾಗಿರಬಹುದು.  ಕೆಲವರು ಕೇವಲ ಫ್ಯಾಷನ್‍ಗಾಗಿ ಯೋಗ ಶಿಬಿರಗಳಿಗೆ ಬಂದು ನಂತರ ಅಭ್ಯಾಸವನ್ನು ಬಿಟ್ಟು ಬಿಡುತ್ತಾರೆ. ಇದು ಸರಿಯಲ್ಲ. ಯೋಗ ಫ್ಯಾಷನ್‍ಗಾಗಿ ಅಲ್ಲ. ಇದೊಂದು ಪ್ರತಿನಿತ್ಯ ಮಾಡುವ ಅನುಷ್ಠಾನದ ಆರೋಗ್ಯಕಲೆ ಎಂದು ಪುತ್ತೂರಿನ ಓಂಕಾರ ಯೋಗ ಚಿಕಿತ್ಸಾ ಮಂದಿರದ ಹಿರಿಯ ಯೋಗಾಚಾರ್ಯ ಪೂಜ್ಯಶ್ರೀ ಕರುಣಾಕರ್ ಜೀ ಇವರು ಅಭಿಪ್ರಾಯ ಪಟ್ಟರು.

ಅವರು ಇಂದು ಸಂಜೆ ದೇವರಾಜ್ ಅರಸ್ ಬಡಾವಣೆಯ ‘ಸಿ’ ಬ್ಲಾಕ್‍ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ಸರಳಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು.

ಸಾಮಾನ್ಯವಾಗಿ ಆಸನಗಳನ್ನು ಮಾಡಿದ ನಂತರ ಶರೀರಭಾಧೆ ಹೆಚ್ಚಾಗಿ ಉಸಿರಾಟ ನಿಯಂತ್ರಣದಲ್ಲಿ ಬರಲು ಸಮಯಬೇಕು.  ಆದರೆ ಪರಿಕರಗಳನ್ನು ಉಪಯೋಗಿಸಿ ಅಭ್ಯಾಸ ಮಾಡಿದಲ್ಲಿ ಆ ತಕ್ಷಣವೇ ಪರಿಣಾಮ ಕಾಣಬಹುದು. ಮತ್ತು ಶರೀರ ಲಘುವಾಗಿ ಉಸಿರಾಟ ಸಹಜವಾಗುವುದು. ಇದು ಯೋಗ ಚಿಕಿತ್ಸಾ ಪದ್ಧತಿಯಲ್ಲಿ ಕಂಡು ಬರುವ ಉತ್ತಮ ಫಲಿತಾಂಶ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ವರ್ತಕರು ಹಾಗೂ ಜಿಲ್ಲಾಯೋಗ ಒಕ್ಕೂಟದ ಅಧ್ಯಕ್ಷರೂ ಆದ.ಬಿ.ಸಿ.ಉಮಾಪತಿಯವರು ಮಾತನಾಡಿ ಯೋಗ ಭಾರತೀಯ ಕಲೆ. ಇಂದು ವಿದೇಶಿಯರು ಹೆಚ್ಚೆಚ್ಚು ಕಲಿಯುತ್ತಿದ್ದಾರೆ. ಯೋಗಕ್ಕೆ ಬಹಳ ಮಹತ್ವವಿದೆ. ಪರಿಕರಗಳ ಜೊತೆಗೆ ಯೋಗಾಭ್ಯಾಸವನ್ನು ಮಾಡಿದಾಗ ಶರೀರದ ನರಗಳು ಹಗುರವಾಗಿ ಆರಾಮ ಅನಿಸುತ್ತದೆ. 1980 ರಲ್ಲಿ ನಾವು ಮತ್ತು ಡಾ||ರಾಘವೇಂದ್ರ ಗುರೂಜಿಯವರು ಮಲ್ಲಾಡಿಹಳ್ಳಿಗೆ ಹೋಗಿ ಶ್ರೀ ಸ್ವಾಮೀಜಿಯವರನ್ನು ಭೇಟಿ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡರು. ಮತ್ತು ಶಿಬಿರದಲ್ಲಿ ಕಷ್ಟಕರವಾದ ಶೀರ್ಷಾಸನ, ಸರ್ವಾಂಗಾಸನವನ್ನು ಹಗ್ಗ, ದಿಂಬು ಮತ್ತು ಕುರ್ಚಿಗಳ ಸಹಾಯದೊಂದಿಗೆ ಅತ್ಯಂತ ಸುಲಭವಾಗಿ ಮಾಡಿದಾಗ ಅನುಭವಿಸಿದ ಆನಂದವನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು. ರಾಘವೇಂದ್ರ ಗುರೂಜಿಯವರು ಬಹಳ ವ್ಯವಸ್ಥಿತವಾಗಿ ಯೋಗಚಿಕಿತ್ಸಾ ಮಂದಿರವನ್ನು ನಿರ್ಮಿಸಿದ್ದಾರೆ. ಇದೊಂದು ಉತ್ತಮ ಆಸ್ಪತ್ರೆ ಎಂದರೆ ತಪ್ಪಾಗಲಾರದು. ಇದರ ಲಾಭವನ್ನು ನಗರದ ಜನತೆ ಸದುಪಯೋಗಪಡಿಸಿಕೊಳ್ಳಲಿ ಎಂದರು.

ಶಿಬಿರಾರ್ಥಿಗಳಾದ ಶ್ರೀಮತಿವನಜಾಕ್ಷಿ ಪುಟ್ಟಲಿಂಗಾಚಾರ್, ಡಾ||ನಾಗರಾಜಾಚಾರ್, ಶಿವಾನಂದ ಸ್ವಾಮಿ, ಯೋಗ ಶಿಕ್ಷಕರುಗಳಾದ ತಿಪ್ಪೇಸ್ವಾಮಿ ಭರಮಸಾಗರ, ಎನ್.ವಿ.ಸುನೀಲ್ ಕುಮಾರ್, ಶ್ರೀಮತಿ ಅಂಜಲೀದೇವಿ, ಕಲಾಶಾಲೆಯ ಹನುಮಂತಾಚಾರ್, ಉಮಾಹಿರೇಮಠ್ ಮತ್ತಿತರರು ಶಿಬಿರದ ಅನುಭವವನ್ನು ಹಂಚಿಕೊಂಡರು. ಪ್ರಸಿದ್ಧ ಹಿರಿಯ ಯೋಗಾಚಾರ್ಯ ಕರುಣಾಕರ್ ಜೀ ಯವರಿಗೆ ಶಾಲು ಹೊದಿಸಿ ಗೌರವಿಸಿ ಶಿಬಿರಾರ್ಥಿಗಳೆಲ್ಲರೂ ಎದ್ದುನಿಂತು ಸಾಷ್ಟಾಂಗ ನಮಸ್ಕಾರಗಳೊಂದಿಗೆ ಗುರುವಂದನೆಯನ್ನು ಸಲ್ಲಿಸಿದರು.

ಆದರ್ಶ ಯೋಗ ಪ್ರತಿಷ್ಠಾನದ ಯೋಗಗುರು ಡಾ||ರಾಘವೇಂದ್ರ ಗುರೂಜಿ ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರನ್ನು ವಂದಿಸಿದರು. ಅನಿಲ್ ಕುಮಾರ್ ರಾಯ್ಕರ್, ಶಂಭುಲಿಂಗಯ್ಯ ಹಿರೇಮಠ್, ಜಗದೀಶ್, ರಾಹುಲ್, ಚಿದಾನಂದ, ಸಂಪತ್‍ಕುಮಾರ್, ಸಿದ್ದಲಿಂಗಸ್ವಾಮಿ ಇನ್ನಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ನಂತರ ಶಾಂತಿಮಂತ್ರದೊಂದಿಗೆ ಸಹಭೋಜನ ಮಾಡಿದ ನಂತರ ಕಾರ್ಯಕ್ರಮವು ಸಂಪನ್ನಗೊಂಡಿತು.

ಇತೀ ಭಗವತ್ ಸೇವೆಯಲ್ಲಿ ನಿಮ್ಮವನಾದ


ಡಾ||ರಾಘವೇಂದ್ರ ಗುರೂಜಿ



Wednesday, August 10, 2016

Inauguration



On 27th aug 2016, Saturday, inauguration  of      sri mahamayi vishwayoga mandira and yoga therapy center at Devaraja urs Layout, C'block Davangere, please do come  on behalf of Adarsha Yoga Pratistana (R) , we need your blessings,




 
 

Sunday, November 15, 2015

ಶಾಲಾ ಶಿಕ್ಷಕರಿಗೆ ಯೋಗ ಪ್ರಶಿಕ್ಷಣ ಕಾರ್ಯಗಾರ


ಕರ್ನಾಟಕ ಸರ್ಕಾರ
ಆಯುಷ್ ಇಲಾಖೆ, ಬೆಂಗಳೂರು,
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಾವಣಗೆರೆ, ಹಾಗೂ
ಜಿಲ್ಲಾ ಆಯುಷ್ ಇಲಾಖೆ, ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ
ಇವರುಗಳ ಸಂಯುಕ್ತಾಶ್ರಯದಲ್ಲಿ

ಆಯುಷ್ ಆರೋಗ್ಯ  IEC ತರಬೇತಿ
ಕಾರ್ಯಕ್ರಮಗಳಡಿಯಲ್ಲಿ ಚನ್ನಗಿರಿ ತಾಲ್ಲೂಕು
ಶಾಲಾ ಶಿಕ್ಷಕರಿಗೆ   ಯೋಗ ಪ್ರಶಿಕ್ಷಣ ಕಾರ್ಯಗಾರ

ದಿನಾಂಕ:-02-11-2015 ರಿಂದ 08-11-2015
ಸ್ಥಳ:- ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಾಡಜ್ಜಿ, ದಾವಣಗೆರೆ ತಾಲ್ಲೂಕು, ಜಿಲ್ಲೆ.
ಡಾ.ರಾಘವೇಂದ್ರ ಗುರೂಜಿಯವರಿಂದ ಉಪನ್ಯಾಸ ಕಾರ್ಯಕ್ರಮ






Friday, June 12, 2015

International Yoga Day 2015



ಭಾರತೀಯರ ಹೆಮ್ಮೆಯ ವಿಶ್ವ ಯೋಗ ದಿನಾಚರಣೆ
ಜೂನ್ 21, 2015
ಇಂದು ನಮಗೆ ಪರಿಚಿತವಿರುವ ಯೋಗ ಶಾಸ್ತ್ರವು ಸುಮಾರು ಹತ್ತು ಸಾವಿರ ವರ್ಷಗಳ ಹಿಂದಯೇ ಭಾರತದಲ್ಲಿ ತಾಂತ್ರಿಕ ನಾಗರೀಕತೆಯ ಅಂಗಗಳಲ್ಲಿ ಕಂಡುಬಂದಿರುತ್ತದೆ. ನಾಗರಿಕತೆಯ ಮೊದಲ ಹಂತದಲ್ಲಿ ಮಾನವನು ತನ್ನ ವಿಧಾನಗಳನ್ನು ಆಧ್ಯಾತ್ಮಿಕ ಅಂತಃಶಕ್ತಿಯನ್ನು ಅರಿತು ಅದನ್ನು ಅಭಿವೃದ್ಧಿಪಡಿಸುವ ವಿಧಾನಗಳನ್ನು ರೂಡಿಸಿಕೊಳ್ಳತೊಡಗಿದಾಗ ಯೋಗ ಪದ್ಧತಿಯು ಆರಂಭವಾಯಿತು. ಕ್ರಮೇಣ ಯೋಗ ವಿಜ್ಞಾನ ವಿಕಾಸಗೊಂಡಿತು. ಜಗತ್ತಿನಾದ್ಯಾಂತ ಪ್ರಾಚೀನ ಋಷಿಮುನಿಗಳು ಇದರ ಬೆಳವಣಿಗೆಗೆ ಕಾರಣೀಭೂತರಾದರು.

ಕ್ರಿ.ಪೂ. 3 ನೇ ಶತಮಾನದಲ್ಲಿ ಮುನಿ ಶ್ರೇಷ್ಠರಲ್ಲಿ ಒಬ್ಬರಾದ ಪತಂಜಲೀ ಮಹರ್ಷಿಯವರು ಯೋಗ ದರ್ಶನಕ್ಕೆ ರೂಪ ಕೊಟ್ಟ ತತ್ವಜ್ಞಾನಿ. ಪ್ರಾಚೀನ ಭಾರತದ ಪ್ರಮುಖ ಚಿಂತನ ಶೀಲ ವ್ಯಕ್ತಿಗಳಲ್ಲಿ ಪ್ರಾತಃಸ್ಮರಣೀಯರಾದ ಪತಂಜಲಿ ಮಹರ್ಷಿಯವರನ್ನು ಇಂದಿಗೂ ಯೋಗ ಪಿತಾಮಹರೆಂದು ಪೂಜಿಸುತ್ತೇವೆ.

ಈಗಿನ ಪಾಕಿಸ್ತಾನದಲ್ಲಿರುವ ಹರಪ್ಪ, ಮೊಹೆಂಜೋದಾರೋಗಳ ಸಿಂಧೂ ಕಣಿವೆಯಲ್ಲಿ ಪುರಾತತ್ವ ಉತ್ಖನನಗಳನ್ನು ಮಾಡಿದಾಗ ಶಿವ ಪಾರ್ವತಿಯರನ್ನು ಹೋಲುವ ಅನೇಕ ವಿಗ್ರಹಗಳು ದೊರಿತ್ತಿದ್ದು, ಈ ಮೂರ್ತಿಗಳ ವಿವಿಧ ಭಂಗಿಗಳು ಯೋಗಾಸನಗಳನ್ನು ಹಾಗೂ ಧ್ಯಾನದ ಭಂಗಿಗಳನ್ನು ನಿರೂಪಿಸಿರುತ್ತವೆ. ಈ ಅವಶೇಷಗಳು ದೊರೆತಂತಹ ಸಿಂಧೂ ಉಪ ಕಂಡದಲ್ಲಿ ಆರ್ಯ ಸಂಸ್ಕೃತಿಯು ಪ್ರವರ್ಧಮಾನಕ್ಕೆ ಬರುವ ಮೊದಲೇ ಅಂದರೆ ವೇದ ಪೂರ್ವ ಕಾಲದಲ್ಲಿ ಇದ್ದಂತಹ ಜನರಿಗೆ ಈ ಸಂಸ್ಕೃತಿಯು ಸಂಬಂಧಿಸಿದ್ದಾಗಿದೆ ಎಂದು ತಿಳಿದು ಬರುತ್ತದೆ. ನಮ್ಮ ಪುರಾಣ ಶಾಸ್ತ್ರಗಳ ಪ್ರಕಾರ ಯೋಗ ವಿದ್ಯೆಯ ಪ್ರವರ್ತಕ ಶಿವ ನೆಂಬುದಾಗಿ ತಿಳಿದು ಬರುತ್ತದೆ, ಪಾರ್ವತಿ ಶಿವನ ಪ್ರಥಮ ಶಿಷ್ಯೆಯಾಗಿದ್ದಳು ಎಂದು ತಿಳಿಸುತ್ತದೆ.

ವಸಿಷ್ಠ ಮಹರ್ಷಿಗಳು, ಮನಃ ಪ್ರಶಮನೋಪಾಯಃ ಯೋಗ ಇತ್ಯಭಿಧೀಯತೇ, ಅಂದರೇ ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗ ಎಂದು ಹೇಳಿರುತ್ತಾರೆ. ಯೋಗವು ಉತ್ತಮವಾಗಿ ಬದುಕುವುದಕ್ಕೆ ಸಂಬಂಧಿಸಿದ ಒಂದು ವಿಜ್ಞಾನ. ಆದ್ದರಿಂದ ಇದನ್ನು ದಿನ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬುದೇ ಇದರ ಉದ್ದೇಶವಾಗಿದೆ. ಯೋಗವು ಪ್ರತಿಯೊಬ್ಬ ವ್ಯಕ್ತಿಯ ಶಾರೀರಿಕ, ಮಾನಸಿಕ, ಭಾವನಾತ್ಮಾಕ, ಭೌತಿಕ ಹಾಗೂ ಆಧ್ಯಾತ್ಮಿಕ ಮೊದಲಾದ ಎಲ್ಲಾ ಅಂಶಗಳ ಮೇಲೂ ಪ್ರಭಾವ ಬೀರುವಂತಾಗಿದ್ದು ಮಾನವನ ಸರ್ವತೋಮುಖ ಅಭಿವೃದ್ಧಿಯಲ್ಲಿ ಇದರ ಪಾತ್ರ ಅತ್ಯಂತ ಪರಿಣಾಮಕಾರಿಯಾಗಿದೆ. ಸಮಗ್ರ ದೇಶದ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಪರಿಪೂರ್ಣ ಸಮನ್ವಯತೆ ಉಂಟು ಮಾಡುವುದು ಯೋಗದ ಉದ್ದೇಶವಾಗಿದೆ.

ನಮ್ಮ ದೇಶದ ಪ್ರಧಾನ ಮಂತ್ರಿ ಮಾನ್ಯ ಶ್ರೀ ನರೇಂದ್ರ ಮೋದಿಯವರು ಅತ್ಯಂತ ಕಳಕಳಿಯಿಂದ 2014ರ ಡಿಸೆಂಬರ್ 11ರಂದು UNGA ಅಂತರಾಷ್ಟ್ರೀಯ ಮಹಾಸಭೆಯಲ್ಲಿ ಜೂನ್ 21 ಅಂತಾರಾಷ್ಟ್ರೀಯ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲು ವಿಷಯ ಮಂಡಿಸಿದಾಗ ಅಮೇರಿಕಾ, ಕೆನಡಾ, ಫಾನ್ಸ್, ಜರ್ಮನಿ, ಇಟಲಿ, ಚೀನಾ, ಜಪಾನ್ ಸೇರಿದಂತೆ ಒಟ್ಟು 193 ಸದಸ್ಯರನ್ನೊಳಗೊಂಡ ಸಭೆಯಲ್ಲಿ 177ಕ್ಕೂ ಹೆಚ್ಚು ರಾಷ್ಟ್ರಗಳು ಅತ್ಯಂತ ಹರ್ಷದಿಂದ ಒಪ್ಪಿಗೆ ಸೂಚಿಸಿದವು. ಈ ಸಂದರ್ಭವು ನಮ್ಮ ಭಾರತೀಯರಿಗೆ ಅತ್ಯಂತ ಹೆಮ್ಮೆಯ ಹಾಗೂ ಹರ್ಷದಾಯಕವಾದ ವಿಷಯವಾಗಿದೆ. ಭಾರತೀಯ ಸನಾತನ ಯೋಗ ವಿದ್ಯೆಗೆ ಒಂದು ಪೂರ್ಣತೆಯನ್ನು ತಂದುಕೊಟ್ಟ ಹೆಗ್ಗಳಿಕೆ ನಮ್ಮ ಮಾನ್ಯ ಪ್ರಧಾನ ಮಂತ್ರಿಯವರಿಗೆ ಸಲ್ಲುತ್ತದೆ.

ಜೂನ್ 21, ಅಂತಾರಾಷ್ಟ್ರೀಯ ವಿಶ್ವಯೋಗ ದಿನಾಚರಣೆ ಆಯ್ಕೆಯ ವಿಶೇಷತೆ:
ಈ ದಿನವನ್ನು ಆಯ್ಕೆ ಮಾಡಲು ಕಾರಣ-
ಈ ದಿನವು ವಿಶೇಷವಾಗಿ ಬೇಸಿಗೆ ಆಯನ ಸಂಕ್ರಾಂತಿ (Summer Solstice Day) ಇಂದು ಭೌಗೋಳಿಕವಾಗಿ ಸೂರ್ಯನ ಪ್ರಖರತೆ ಅತ್ಯಂತ ಹೆಚ್ಚಾಗಿ ಭೂಮಿಯ ಮೇಲೆ ಕಾಣಿಸಿಕೊಳ್ಳಲಿದ್ದು, ವರ್ಷಕ್ಕೊಮ್ಮೆ ಮಾತ್ರ ಈ ದಿನದ ಅವಧಿಯು ಎಂದಿಗಿಂತಲೂ ಹೆಚ್ಚಾಗಿರುತ್ತದೆ. ಆದ್ದರಿಂದ ಈ ದಿನದಂದು ಅನೇಕ ರಾಷ್ಟ್ರಗಳಲ್ಲಿ ವಿಶೇಷ ಪ್ರಾಮುಖ್ಯತೆ (special significance) ಇರುತ್ತದೆ.
ಯೋಗ ಪರಂಪರೆಯಲ್ಲಿ ಅತೀಂದ್ರೀಯ ಶಕ್ತಿಯುಳ್ಳ ಸದ್ಗುರುಗಳು ಕಂಡುಕೊಂಡಂತೆ-ಬೇಸಿಗೆ ಆಯನ ಸಂಕ್ರಾಂತಿ ಎಂದು ಆದಿಯೋಗಿ (the first yogi) ಯು ಪೂರ್ವ ದಿಕ್ಕಿಗೆ ತಿರುಗಿ ತನ್ನ ನೇರದೃಷ್ಟಿಯನ್ನು ಸಪ್ತಋಷಿಗಳ (Seven Sages) ಮೇಲೆ ಇಟ್ಟ ದಿನವಾಗಿದ್ದು, ಇವರುಗಳು ಯೋಗ ವಿಜ್ಞಾನವನ್ನು ವಿಶ್ವದಾದ್ಯಂತ ಹರಡಿದರು ಎಂದು ಇತಿಹಾಸದಿಂದ ತಿಳಿಯಲಾಗಿದೆ. ಆದ್ದರಿಂದ ಈ ದಿನವು ಮಾನವ ಕೋಟಿಯ ಇತಿಹಾಸದಲ್ಲಿ (History of Humanity) ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಎಲ್ಲಾ ವಿಶೇಷತೆಗಳು ಇರುವ ಕಾರಣವಾಗಿ ಮಾನ್ಯ ಪ್ರಧಾನ ಮಂತ್ರಿಯವರು ಈ ದಿವಸವನ್ನೇ ಆಯ್ಕೆ ಮಾಡಿ ಭಾರತೀಯ ಸನಾತನ ಯೋಗ ವಿಜ್ಞಾನಕ್ಕೆ ವಿಶ್ವಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲು ಮನ್ನಣೆ ದೊರಕಿಸಿಕೊಟ್ಟಿರುವುದು ಭಾರತೀಯರ ಸೌಭಾಗ್ಯವೇ ಸರಿ.
ಬನ್ನಿ, ಯೋಗ-ಶಾಂತಿ ಮತ್ತು ಸೌಹಾರ್ದತೆಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಪ್ರಥಮ ವರ್ಷದ ಅಂತಾರಾಷ್ಟ್ರೀಯ ವಿಶ್ವಯೋಗ ದಿನಾಚರಣೆಯನ್ನು ಕೇವಲ ಸಾಂಕೇತಿಕವಾಗಿ ಆಚರಿಸದೇ ಭಾರತೀಯರೆಲ್ಲರೂ ಮನ-ಮನೆಗಳಲ್ಲಿ ಹಬ್ಬವಾಗಿ ಆಚರಿಸೋಣ.

|| ಆರೋಗ್ಯಂ ಭಾಸ್ಕರಾಧೀಚ್ಛೇತ್ ||
|| ಸರ್ವೇ ಜನಃ ಸುಖಿನೋಭವಂತುಃ ||

- ಡಾ|| ರಾಘವೇಂದ್ರ ಗುರೂಜಿ, 
ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗ ತಜ್ಞ , ದಾವಣಗೆರೆ

Thursday, January 29, 2015

ಸಾಮೂಹಿಕ ಸೂರ್ಯ ನಮನ



ಸಾಮೂಹಿಕ ಸೂರ್ಯ ನಮನ
        
        ನಗರದ ಆದರ್ಶ ಯೋಗ ಪ್ರತಿಷ್ಠಾನ (ರಿ) ದ ವತಿಯಿಂದ ಹಮ್ಮಿಕೊಂಡಿರುವ ಉಚಿತ ಸೂರ್ಯ ನಮಸ್ಕಾರ ಯೋಗ ಶಿಬಿರದಲ್ಲಿ ಶ್ರೀ.ಬಕ್ಕೇಶ್ವರ ಪ್ರೌಢಶಾಲಾ ಮಕ್ಕಳು ಸಾಮೂಹಿಕವಾಗಿ ಬುಜಂಗಾಸನದ ಸ್ಥಿತಿಯಲ್ಲಿ ಸೂರ್ಯ ನಮನ ಮಾಡುತ್ತಿರುವ ಚಿತ್ರದ ಒಂದು ನೋಟ. ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.





Wednesday, January 28, 2015

ದೇಹವನ್ನು ಸುದೃಢವಾಗಿಡಲು ಯೋಗ ಮಾಡಬೇಕು. - ಪ್ರೊ|| ಎಸ್.ಹೆಚ್.ಪಟೇಲ್



ದೇಹವನ್ನು ಸುದೃಢವಾಗಿಡಲು ಯೋಗ ಮಾಡಬೇಕು.
ಪ್ರೊ|| ಎಸ್.ಹೆಚ್.ಪಟೇಲ್


ದಾವಣಗೆರೆ . ೨೮

      ದೇಹ ಎಲ್ಲಿಯವರೆಗೆ ಆರೋಗ್ಯವಾಗಿರುತ್ತೋ ಅಲ್ಲಿಯವರೆಗೆ ಬದುಕಿರುತ್ತೀರಿ. ಖಾಯಿಲೆ ಬಂದಾಗ ವೈದ್ಯರ ಬಳಿ ಓಡಿ ಹೋಗುತ್ತೀರಿ. ಅದರ ಬದಲು ನಮ್ಮ ದೇಹವು ಸುದೃಢವಾಗಿ, ಆರೋಗ್ಯವಾಗಿರಬೇಕಾದರೆ ಪ್ರತಿ ದಿನ ಯೋಗಾಭ್ಯಾಸವನ್ನು ಮಾಡಬೇಕು ಎಂದು ಖ್ಯಾತ ವಿಚಾರವಾದಿ ಪ್ರೊ|| ಎಸ್.ಹೆಚ್.ಪಟೇಲ್ ರವರು ತಿಳಿಸಿದರು.

      ಅವರು ಇಂದು ನಗರದ ಶ್ರೀ ಬಕ್ಕೇಶ್ವರ ಪ್ರೌಢಶಾಲೆಯಲ್ಲಿ ನಗರದ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಇವರು ರಥಸಪ್ತಮಿಯ ಪ್ರಯುಕ್ತ ಆಯೋಜಿಸಲಾಗಿದ್ದ ಉಚಿತ ಸೂರ್ಯನಮಸ್ಕಾರ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

      ಆರೋಗ್ಯದ ದೃಷ್ಟಿಯಿಂದ ಎಲ್ಲಾ ಕ್ರೀಡೆಗಳಿಗಿಂತಲೂ ಯೋಗ ಇಂದು ಯುವ ಪೀಳಿಗೆಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ನಿಟ್ಟಿನಲ್ಲಿ ಶಾಲಾ ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ಎಲ್ಲಾ ಕ್ರೀಡೆಗಳ ಜೊತೆಯಲ್ಲಿ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಿ ಆರೋಗ್ಯದ ವಾತಾವರಣವನ್ನು ಮಕ್ಕಳಿಗೆ ಪರಿಚಯಿಸಿಕೊಡಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಈಶಾನಾಯ್ಕ ಮಾತನಾಡಿ ಪಾಶ್ಚಿಮಾತ್ಯರು ನಮ್ಮ ಯೋಗ ವಿದ್ಯೆಯನ್ನು ನಿತ್ಯ ಅಭ್ಯಾಸ ಮಾಡಿ ಅದರ ಲಾಭವನ್ನು ಪಡೆಯುತ್ತಿದ್ದಾರೆ. ನಮ್ಮದೇ ಆದ ಶರೀರ ಶಾಸ್ತ್ರವನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಯೋಗ ಅತ್ಯಾವಶ್ಯಕವಾಗಿದೆ ಎಂದರು.

      ಶಿಬಿರದ ರೂವಾರಿಗಳಾದ ಅಂತಾರಾಷ್ಟ್ರೀಯ ಯೋಗ ಪ್ರಶಸ್ತಿ ಪುರಸ್ಕೃತ ಡಾ|| ರಾಘವೇಂದ್ರ ಗುರೂಜಿಯವರು ರಥಸಪ್ತಮಿಯ ವಿಶೇಷತೆಯನ್ನು ತಿಳಿಸಿ ಏಕಾಗ್ರತೆಯನ್ನು ಪಡೆಯುವುದರ ಮೂಲಕ ಶರೀರ ಲವಲವಿಕೆಯನ್ನು ಹೊಂದುವ ವಿಧಾನಗಳನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿದರು. ಯೋಗ ಸಾಧಕ ಶ್ರೀ ಕೆ.ಕೆ ಚಿದಾನಂದ ಸೂರ್ಯನಮಸ್ಕಾರ ಹಾಗೂ ಕೆಲವು ಉಪಯುಕ್ತ ಆಸನಗಳನ್ನು ಪ್ರದರ್ಶಿಸಿದರು.
      ಪ್ರಾರಂಭದಲ್ಲಿ ಕು||ತೇಜಸ್ವಿನಿ ಪ್ರಾರ್ಥಿಸಿದರು. ದೈಹಿಕ ಶಿಕ್ಷಕಿ ಕು||ಸುನಿತಾ ಎಲ್ಲರನ್ನೂ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸಿ.ಬಿ.ಕಲ್ಯಾಣಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕ ಟಿ.ಎಸ್.ರುದ್ರೇಶ್ ಎಲ್ಲರನ್ನು ವಂದಿಸಿದರು.



Friday, January 23, 2015

ಸೂರ್ಯೋಪಾಸನೆಯ ಹಬ್ಬ ರಥಸಪ್ತಮಿ

ಸೂರ್ಯೋಪಾಸನೆಯ ಹಬ್ಬ ರಥಸಪ್ತಮಿ

    ರಥಸಪ್ತಮಿಯನ್ನು ಅಚಲಾಸಪ್ತಮೀ, ಮಾಘಸಪ್ತಮೀ ಅಥವಾ ಸೂರ್ಯಸಪ್ತಮಿ ಎಂದು ಕರೆಯುವರು. ರಥಸಪ್ತಮಿಯನ್ನು ವೇದಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಒಂದು ವಿಶೇಷ ಹಾಗೂ ವಿಶಿಷ್ಠವಾದ ಹಬ್ಬವಾಗಿದೆ.

ರಥಸಪ್ತಮಿಯು ಮಾಘಮಾಸದ ಶುಕ್ಲಪಕ್ಷದ ಏಳನೇ ತಿಥಿ ಅಂದರೆ ಸಪ್ತಮಿಯ ದಿವಸದಂದು ಆಚರಿಸಲ್ಪಡುವ ಪದ್ದತಿಯಾಗಿದೆ. ಇದು ವೈವಸತ್ವ ಮನ್ವಂತರ ಪ್ರಾರಂಭವಾದ ದಿನ. ಹಾಗೂ ಸೂರ್ಯದೇವನ ಜನ್ಮದಿನವೂ ಆಗಿದೆ.

ಇದೇ ೨೦೧೫ ಜನವರಿ ೨೬ರ ಸೋಮವಾರ ರಥಸಪ್ತಮಿ ಹಬ್ಬವನ್ನು ಆಚರಿಸಲಾಗುವುದು. ಹಿಂದೂ ರಾಷ್ಟ್ರದಲ್ಲಿ ಅಲ್ಲದೇ ಜಗತ್ತಿನ ಅನೇಕ ಭಾಗಗಳಲ್ಲಿ ರಥಸಪ್ತಮಿಯನ್ನು ಆಚರಿಸುವರು. ಅಂದು ವಿಶೇಷವಾದ ಪೂಜಾ ಹೋಮ ಹವನಗಳು ಹಾಗೂ ಸಹಸ್ರನಾಮ, ೧೦೮ ನಾಮ ಜಪ ಅಲ್ಲದೇ ವಿಶೇಷವಾಗಿ ಯೋಗ ಸಾಧಕರು ೧೦೮ ಸೂರ್ಯ ನಮಸ್ಕಾರಗಳನ್ನು ವಿಧಿವಿಧಾನಗಳೊಂದಿಗೆ ಸಾಮೂಹಿಕವಾಗಿ ಆಚರಿಸುತ್ತಾರೆ. ದಿನ ಅತ್ಯಂತ ಮಹತ್ವವಾಗಿರುವುದೇಕೆಂದರೆ ಸೂರ್ಯದೇವನು ತನ್ನ ಪಥವನ್ನು ಅಂದರೆ ದಿಕ್ಕನ್ನು ಉತ್ತರಾಯಣದ ಕಡೆಗೆ (ಉತ್ತರ ದಿಕ್ಕಿಗೆ) ಬದಲಿಸುವ ಸುದಿನ. ಇಂದಿನಿಂದ ಸೂರ್ಯದೇವನಲ್ಲಿರುವ ಓಜಸ್ಸು, ತೇಜಸ್ಸು, ಹೆಚ್ಚು ಪ್ರಖರತೆಯನ್ನುಂಟು ಮಾಡಿ ಸಕಲ ಚರಾಚರಾ  ವಸ್ತುಗಳ ಮೇಲೆ ಅರ್ಥಾತ್ ಪ್ರಕೃತಿ ಮತ್ತು ಮಾನವನ ಬದುಕಿಗೆ ಚೈತನ್ಯವನ್ನುಂಟು ಮಾಡುವ ದಿನ.

ರಥಸಪ್ತಮಿಯ ದಿನದಂದು ಸೂರ್ಯ ಭಗವಾನನು ತನ್ನ ರಥಕ್ಕೆ ಅರುಣನನ್ನು ಸಾರಥಿಯನ್ನಾಗಿಸಿಕೊಂಡು ಗಾಯತ್ರೀ, ಬ್ರಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಹಾಗೂ ಪಂಕ್ತಿಯೆಂಬ ಏಳು ಛಂದಸ್ಸುಗಳ ಹೆಸರಿನ ಏಳು ಕುದುರೆಗಳನ್ನು ಹೂಡಿ ಸಂಚಾರಕ್ಕೆ ಹೊರಡುತ್ತಾನೆ. ಏಳು ಕುದುರೆಗಳು ಕಾಮನ ಬಿಲ್ಲಿನ ಏಳು ಬಣ್ಣಗಳು ಹಾಗೂ ವಾರದ ಏಳು ದಿನಗಳನ್ನು ಸೂಚಿಸುತ್ತವೆ.

ಹಿಂದೂ ರಾಷ್ಟ್ರದ ಪೂಜಾ ಕ್ರಮಗಳು

    ರಥಸಪ್ತಮಿಯಂದು ಮನೆಯ ಅಂಗಳ ಹಾಗೂ ದೇವರ ಮನೆಯಲ್ಲಿ ಬಣ್ಣಬಣ್ಣದ ರಂಗವಲ್ಲಿಯಿಂದ ಸೂರ್ಯ ರಥದ ಚಿತ್ರ ಬಿಡಿಸುತ್ತಾರೆ. ಅಂದು ಬೆಳಗಿನ ಜಾವ ತಲೆ, ಭುಜ, ಕತ್ತು, ಕಂಕುಳ, ತೊಡೆ, ಪಾದಗಳ ಮೇಲೆ ಬಿಳಿ ಎಕ್ಕದ ಎಲೆ (ಶ್ವೇತಾರ್ಕ) ಇಟ್ಟುಕೊಂಡು ಅಭ್ಯಂಜನ (ಸ್ನಾನ) ಮಾಡಿ ಪೂರ್ವಾಭಿಮುಖವಾಗಿ ಸೂರ್ಯ ದೇವನಿಗೆ ನಮಸ್ಕರಿಸಿ,
ಸಪ್ತ ಸಪ್ತ ಹಹಾ ಪ್ರೀತ| ಸಪ್ತಲೋಕ ಪ್ರಧೀಪನಾ| ಸಪ್ತಮಿ ಸರಿತೋ ದೇವಾ| ಗೃಹಣಾರ್ಘ್ಯಂ ದಿವಾಕರ: ಎಂಬ ಶ್ಲೋಕ ಪಠಿಸುತ್ತಾ ಸೂರ್ಯನಿಗೆ ಅರ್ಘ್ಯ ನೀಡುತ್ತಾರೆ. ಕೆಲವರು ಸೂರ್ಯ ಸಹಸ್ರ ನಾಮಾರ್ಚನೆ ಮಾಡಿದರೆ, ಇನ್ನೂ ಕೆಲವರು ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಪ್ರದಕ್ಷಿಣೆ ಹಾಕುತ್ತಾ ದ್ವಾದಶ ನಾಮದ ಮಂತ್ರ ಪಠಿಸುತ್ತಾ ೧೦೮ ಪ್ರದಕ್ಷಿಣೆ ಹಾಕುತ್ತಾರೆ. ಓಂ ಮಿತ್ರಾಯ ನಮಃ, ಓಂ ರವಯೇ ನಮಃ, ಓಂ ಸೂರ್ಯಯ ನಮಃ, ಓಂ ಭಾನವೇ ನಮಃ, ಓಂ ಖಗಾಯ ನಮಃ, ಓಂ ಪೂಷ್ಲೇ ನಮಃ, ಓಂ ಹಿರಣ್ಯಗರ್ಭಾಯ ನಮಃ, ಓಂ ಅರ್ಕಾಯ ನಮಃ, ಓಂ ಭಾಸ್ಕರಾಯ ನಮಃ, ಹನ್ನೆರಡು ಹೆಸರುಗಳು ೧೨ ತಿಂಗಳನ್ನು ಸೂಚಿಸುತ್ತದೆ. ರಥಸಪ್ತಮಿಯ  ದಿನದಂದು ಹಾಲು ಉಕ್ಕಿಸುವ ಆಚರಣೆಯು ಕೆಲವೆಡೆ ಇದೆ. ಮತ್ತೆ ಕೆಲವರು ಹಾಲಿಗೆ ಸಕ್ಕರೆ ಅಥವಾ ಬೆಲ್ಲವನ್ನು ಬೆರೆಸಿ ಪಾಯಸ ಮಾಡಿ ಸೂರ್ಯದೇವನಿಗೆ ನೈವೇದ್ಯ ಅರ್ಪಿಸುತ್ತಾರೆ. ಹಿಂದಿನ ದಿನವಾದ ಷಷ್ಠೀ ದಿನದಂದು ಒಪ್ಪತ್ತು ಉಪವಾಸವಿದ್ದು, ಸಪ್ತಮೀ ದಿನ ಪೂರ್ಣ ಉಪವಾಸದ ವೃತವನ್ನು ಕೂಡ ಮಾಡುವರು.

ಸೂರ್ಯೋದಯ ಅಥವಾ ಸೂರ್ಯ ನೆತ್ತಿಯ ಮೇಲೆ ಬರುವ ಹೊತ್ತಿಗೆ ಸರಿಯಾಗಿ  ಹಾಲು ಉಕ್ಕಿಸುತ್ತಾರೆ . ಹೀಗೆ ಹಾಲು ಉಕ್ಕಿಸುವುದರಿಂದ ಮನೆಯು ಏಳಿಗೆಯಾಗುತ್ತದೆ. ಮತ್ತು ಸುಖ, ಸಂತೋಷ, ಆರೋಗ್ಯ, ಸಂಪತ್ತು, ಸಮೃದ್ದಿಯ ಸಂಕೇತವೆಂಬ ನಂಬಿಕೆಯೂ ಇದೆ. ಸೂರ್ಯದೇವನು ಮುನುಕುಲಕ್ಕೆ ಹಾಗೂ ಸಕಲ ಪಶುಪಕ್ಷಿ ಸಂಕುಲಕ್ಕೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ನೀಡುವ ಪರಮಾತ್ಮನಾಗಿದ್ದಾನೆ.

ಸೂರ್ಯ ಆರೋಗ್ಯದಾತ :

    ಸೂರ್ಯನು ಆರೋಗ್ಯದಾತನೆಂಬುದಾಗಿ ಆರೋಗ್ಯಂ ಭಾಸ್ಕರಾದಿಚ್ಚೇತ್ ಎಂದು ಋಗ್ವೇದವು ಅವನನ್ನು ಪ್ರಾರ್ಥಿಸಿದೆ. ವೇದಗಳು ಅಲ್ಲದೇ ಪುರಾಣಗಳೂ ಸಹ ಸೂರ್ಯನನ್ನು ರೋಗ ನಿವಾರಕನೆಂದು ಸಾರಿದೆ. ಸರ್ವವ್ಯಾಧಿಗಳೂ, ಮಹಾವ್ಯಾಧಿಗಳೂ ನಿವಾರಣೆಯಾಗುತ್ತದೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮನು ತಿಳಿಸಿರುತ್ತಾನೆ. ಪದ್ಮಪುರಾಣದಲ್ಲಿ ಭದ್ರೇಶ್ವರನೆಂಬ ರಾಜನು ಸೂರ್ಯಾರಾಧನೆಯಿಂದ ಶ್ವೇತಕುಷ್ಠ (ಬಿಳಿತೊನ್ನು) ರೋಗವನ್ನು ಪರಿಹರಿಸಿ ಕೊಂಡನೆಂಬ ಕಥೆಯೇ ಇದೆ. ಸೂರ್ಯಾರಾಧನೆ, ಸೂರ್ಯನಮಸ್ಕಾರಗಳಿಂದ ಕನಿಷ್ಠ ಪ್ರಯೋಜನಗಳೆಂದರೆ ಬಲಸಂವರ್ಧನೆ, ಆರೋಗ್ಯ, ಆಯುಷ್ಯಾಭಿವೃದ್ಧಿ, ಮನಃಶಕ್ತಿ ಸಂಚಯ, ಪ್ರಸನ್ನತೆ, ಉತ್ಸಾಹ, ಉಲ್ಲಾಸ ಮನಸ್ಸಿಗಾಗುತ್ತದೆ.

    ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಸೂರ್ಯನಾರಾಯಣ ಸ್ವಾಮಿ ದೇವಸ್ಥಾನವೂ ಸೇರಿದಂತೆ ನಮ್ಮ ದೇಶದಲ್ಲಿ ಸೂರ್ಯದೇವಾಲಯಗಳು, ಕೋನಾರ್ಕ್, ದಕ್ಷಿಣಾರ್ಕ, ಉನಾಪು, ಗೋಲ್ಪುರ, ಅರಸವಲ್ಲಿ ಮತ್ತು ಕುಂಭಕೋಣಂಗಳಲ್ಲಿರುವ ದೇವಾಲಯಗಳಲ್ಲಿ ರಥಸಪ್ತಮಿಯಂದು ವಿಶೇಷ ಅಲಂಕಾರ ಪೂಜೆಯೊಂದಿಗೆ ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ಪ್ರತಿ ವರ್ಷವೂ ಆಚರಿಸಲ್ಪಡುತ್ತದೆ.

- ಡಾ|| ರಾಘವೇಂದ್ರ ಗುರೂಜಿ,
ಪಿಹೆಚ್.ಡಿ., (ಬಂಗಾರದ ಪದಕ) ಸೆಬೋರ್ಗಾ ಯುರೋಫ್
ಅಂತಾರಾಷ್ಟ್ರೀಯ ಯೋಗಗುರುಗಳು. ದಾವಣಗೆರೆ