ದೇಹವನ್ನು ಸುದೃಢವಾಗಿಡಲು ಯೋಗ ಮಾಡಬೇಕು.
- ಪ್ರೊ|| ಎಸ್.ಹೆಚ್.ಪಟೇಲ್
’
ದಾವಣಗೆರೆ ಜ. ೨೮
ದೇಹ ಎಲ್ಲಿಯವರೆಗೆ ಆರೋಗ್ಯವಾಗಿರುತ್ತೋ ಅಲ್ಲಿಯವರೆಗೆ ಬದುಕಿರುತ್ತೀರಿ. ಖಾಯಿಲೆ ಬಂದಾಗ ವೈದ್ಯರ ಬಳಿ ಓಡಿ ಹೋಗುತ್ತೀರಿ. ಅದರ ಬದಲು ನಮ್ಮ ದೇಹವು ಸುದೃಢವಾಗಿ, ಆರೋಗ್ಯವಾಗಿರಬೇಕಾದರೆ ಪ್ರತಿ ದಿನ ಯೋಗಾಭ್ಯಾಸವನ್ನು ಮಾಡಬೇಕು ಎಂದು ಖ್ಯಾತ ವಿಚಾರವಾದಿ ಪ್ರೊ|| ಎಸ್.ಹೆಚ್.ಪಟೇಲ್ ರವರು ತಿಳಿಸಿದರು.
ಅವರು ಇಂದು ನಗರದ ಶ್ರೀ ಬಕ್ಕೇಶ್ವರ ಪ್ರೌಢಶಾಲೆಯಲ್ಲಿ ನಗರದ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಇವರು ರಥಸಪ್ತಮಿಯ ಪ್ರಯುಕ್ತ ಆಯೋಜಿಸಲಾಗಿದ್ದ ಉಚಿತ ಸೂರ್ಯನಮಸ್ಕಾರ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯದ ದೃಷ್ಟಿಯಿಂದ ಎಲ್ಲಾ ಕ್ರೀಡೆಗಳಿಗಿಂತಲೂ ಯೋಗ ಇಂದು ಯುವ ಪೀಳಿಗೆಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲಾ ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ಎಲ್ಲಾ ಕ್ರೀಡೆಗಳ ಜೊತೆಯಲ್ಲಿ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಿ ಆರೋಗ್ಯದ ವಾತಾವರಣವನ್ನು ಮಕ್ಕಳಿಗೆ ಪರಿಚಯಿಸಿಕೊಡಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಈಶಾನಾಯ್ಕ ಮಾತನಾಡಿ ಪಾಶ್ಚಿಮಾತ್ಯರು ನಮ್ಮ ಯೋಗ ವಿದ್ಯೆಯನ್ನು ನಿತ್ಯ ಅಭ್ಯಾಸ ಮಾಡಿ ಅದರ ಲಾಭವನ್ನು ಪಡೆಯುತ್ತಿದ್ದಾರೆ. ನಮ್ಮದೇ ಆದ ಈ ಶರೀರ ಶಾಸ್ತ್ರವನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಯೋಗ ಅತ್ಯಾವಶ್ಯಕವಾಗಿದೆ ಎಂದರು.
ಶಿಬಿರದ ರೂವಾರಿಗಳಾದ ಅಂತಾರಾಷ್ಟ್ರೀಯ ಯೋಗ ಪ್ರಶಸ್ತಿ ಪುರಸ್ಕೃತ ಡಾ|| ರಾಘವೇಂದ್ರ ಗುರೂಜಿಯವರು ರಥಸಪ್ತಮಿಯ ವಿಶೇಷತೆಯನ್ನು ತಿಳಿಸಿ ಏಕಾಗ್ರತೆಯನ್ನು ಪಡೆಯುವುದರ ಮೂಲಕ ಶರೀರ ಲವಲವಿಕೆಯನ್ನು ಹೊಂದುವ ವಿಧಾನಗಳನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿದರು. ಯೋಗ ಸಾಧಕ ಶ್ರೀ ಕೆ.ಕೆ ಚಿದಾನಂದ ಸೂರ್ಯನಮಸ್ಕಾರ ಹಾಗೂ ಕೆಲವು ಉಪಯುಕ್ತ ಆಸನಗಳನ್ನು ಪ್ರದರ್ಶಿಸಿದರು.
ಪ್ರಾರಂಭದಲ್ಲಿ ಕು||ತೇಜಸ್ವಿನಿ ಪ್ರಾರ್ಥಿಸಿದರು. ದೈಹಿಕ ಶಿಕ್ಷಕಿ ಕು||ಸುನಿತಾ ಎಲ್ಲರನ್ನೂ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸಿ.ಬಿ.ಕಲ್ಯಾಣಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕ ಟಿ.ಎಸ್.ರುದ್ರೇಶ್ ಎಲ್ಲರನ್ನು ವಂದಿಸಿದರು.
Good one
ReplyDelete