Friday, January 23, 2015

ಸೂರ್ಯೋಪಾಸನೆಯ ಹಬ್ಬ ರಥಸಪ್ತಮಿ

ಸೂರ್ಯೋಪಾಸನೆಯ ಹಬ್ಬ ರಥಸಪ್ತಮಿ

    ರಥಸಪ್ತಮಿಯನ್ನು ಅಚಲಾಸಪ್ತಮೀ, ಮಾಘಸಪ್ತಮೀ ಅಥವಾ ಸೂರ್ಯಸಪ್ತಮಿ ಎಂದು ಕರೆಯುವರು. ರಥಸಪ್ತಮಿಯನ್ನು ವೇದಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಒಂದು ವಿಶೇಷ ಹಾಗೂ ವಿಶಿಷ್ಠವಾದ ಹಬ್ಬವಾಗಿದೆ.

ರಥಸಪ್ತಮಿಯು ಮಾಘಮಾಸದ ಶುಕ್ಲಪಕ್ಷದ ಏಳನೇ ತಿಥಿ ಅಂದರೆ ಸಪ್ತಮಿಯ ದಿವಸದಂದು ಆಚರಿಸಲ್ಪಡುವ ಪದ್ದತಿಯಾಗಿದೆ. ಇದು ವೈವಸತ್ವ ಮನ್ವಂತರ ಪ್ರಾರಂಭವಾದ ದಿನ. ಹಾಗೂ ಸೂರ್ಯದೇವನ ಜನ್ಮದಿನವೂ ಆಗಿದೆ.

ಇದೇ ೨೦೧೫ ಜನವರಿ ೨೬ರ ಸೋಮವಾರ ರಥಸಪ್ತಮಿ ಹಬ್ಬವನ್ನು ಆಚರಿಸಲಾಗುವುದು. ಹಿಂದೂ ರಾಷ್ಟ್ರದಲ್ಲಿ ಅಲ್ಲದೇ ಜಗತ್ತಿನ ಅನೇಕ ಭಾಗಗಳಲ್ಲಿ ರಥಸಪ್ತಮಿಯನ್ನು ಆಚರಿಸುವರು. ಅಂದು ವಿಶೇಷವಾದ ಪೂಜಾ ಹೋಮ ಹವನಗಳು ಹಾಗೂ ಸಹಸ್ರನಾಮ, ೧೦೮ ನಾಮ ಜಪ ಅಲ್ಲದೇ ವಿಶೇಷವಾಗಿ ಯೋಗ ಸಾಧಕರು ೧೦೮ ಸೂರ್ಯ ನಮಸ್ಕಾರಗಳನ್ನು ವಿಧಿವಿಧಾನಗಳೊಂದಿಗೆ ಸಾಮೂಹಿಕವಾಗಿ ಆಚರಿಸುತ್ತಾರೆ. ದಿನ ಅತ್ಯಂತ ಮಹತ್ವವಾಗಿರುವುದೇಕೆಂದರೆ ಸೂರ್ಯದೇವನು ತನ್ನ ಪಥವನ್ನು ಅಂದರೆ ದಿಕ್ಕನ್ನು ಉತ್ತರಾಯಣದ ಕಡೆಗೆ (ಉತ್ತರ ದಿಕ್ಕಿಗೆ) ಬದಲಿಸುವ ಸುದಿನ. ಇಂದಿನಿಂದ ಸೂರ್ಯದೇವನಲ್ಲಿರುವ ಓಜಸ್ಸು, ತೇಜಸ್ಸು, ಹೆಚ್ಚು ಪ್ರಖರತೆಯನ್ನುಂಟು ಮಾಡಿ ಸಕಲ ಚರಾಚರಾ  ವಸ್ತುಗಳ ಮೇಲೆ ಅರ್ಥಾತ್ ಪ್ರಕೃತಿ ಮತ್ತು ಮಾನವನ ಬದುಕಿಗೆ ಚೈತನ್ಯವನ್ನುಂಟು ಮಾಡುವ ದಿನ.

ರಥಸಪ್ತಮಿಯ ದಿನದಂದು ಸೂರ್ಯ ಭಗವಾನನು ತನ್ನ ರಥಕ್ಕೆ ಅರುಣನನ್ನು ಸಾರಥಿಯನ್ನಾಗಿಸಿಕೊಂಡು ಗಾಯತ್ರೀ, ಬ್ರಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಹಾಗೂ ಪಂಕ್ತಿಯೆಂಬ ಏಳು ಛಂದಸ್ಸುಗಳ ಹೆಸರಿನ ಏಳು ಕುದುರೆಗಳನ್ನು ಹೂಡಿ ಸಂಚಾರಕ್ಕೆ ಹೊರಡುತ್ತಾನೆ. ಏಳು ಕುದುರೆಗಳು ಕಾಮನ ಬಿಲ್ಲಿನ ಏಳು ಬಣ್ಣಗಳು ಹಾಗೂ ವಾರದ ಏಳು ದಿನಗಳನ್ನು ಸೂಚಿಸುತ್ತವೆ.

ಹಿಂದೂ ರಾಷ್ಟ್ರದ ಪೂಜಾ ಕ್ರಮಗಳು

    ರಥಸಪ್ತಮಿಯಂದು ಮನೆಯ ಅಂಗಳ ಹಾಗೂ ದೇವರ ಮನೆಯಲ್ಲಿ ಬಣ್ಣಬಣ್ಣದ ರಂಗವಲ್ಲಿಯಿಂದ ಸೂರ್ಯ ರಥದ ಚಿತ್ರ ಬಿಡಿಸುತ್ತಾರೆ. ಅಂದು ಬೆಳಗಿನ ಜಾವ ತಲೆ, ಭುಜ, ಕತ್ತು, ಕಂಕುಳ, ತೊಡೆ, ಪಾದಗಳ ಮೇಲೆ ಬಿಳಿ ಎಕ್ಕದ ಎಲೆ (ಶ್ವೇತಾರ್ಕ) ಇಟ್ಟುಕೊಂಡು ಅಭ್ಯಂಜನ (ಸ್ನಾನ) ಮಾಡಿ ಪೂರ್ವಾಭಿಮುಖವಾಗಿ ಸೂರ್ಯ ದೇವನಿಗೆ ನಮಸ್ಕರಿಸಿ,
ಸಪ್ತ ಸಪ್ತ ಹಹಾ ಪ್ರೀತ| ಸಪ್ತಲೋಕ ಪ್ರಧೀಪನಾ| ಸಪ್ತಮಿ ಸರಿತೋ ದೇವಾ| ಗೃಹಣಾರ್ಘ್ಯಂ ದಿವಾಕರ: ಎಂಬ ಶ್ಲೋಕ ಪಠಿಸುತ್ತಾ ಸೂರ್ಯನಿಗೆ ಅರ್ಘ್ಯ ನೀಡುತ್ತಾರೆ. ಕೆಲವರು ಸೂರ್ಯ ಸಹಸ್ರ ನಾಮಾರ್ಚನೆ ಮಾಡಿದರೆ, ಇನ್ನೂ ಕೆಲವರು ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಪ್ರದಕ್ಷಿಣೆ ಹಾಕುತ್ತಾ ದ್ವಾದಶ ನಾಮದ ಮಂತ್ರ ಪಠಿಸುತ್ತಾ ೧೦೮ ಪ್ರದಕ್ಷಿಣೆ ಹಾಕುತ್ತಾರೆ. ಓಂ ಮಿತ್ರಾಯ ನಮಃ, ಓಂ ರವಯೇ ನಮಃ, ಓಂ ಸೂರ್ಯಯ ನಮಃ, ಓಂ ಭಾನವೇ ನಮಃ, ಓಂ ಖಗಾಯ ನಮಃ, ಓಂ ಪೂಷ್ಲೇ ನಮಃ, ಓಂ ಹಿರಣ್ಯಗರ್ಭಾಯ ನಮಃ, ಓಂ ಅರ್ಕಾಯ ನಮಃ, ಓಂ ಭಾಸ್ಕರಾಯ ನಮಃ, ಹನ್ನೆರಡು ಹೆಸರುಗಳು ೧೨ ತಿಂಗಳನ್ನು ಸೂಚಿಸುತ್ತದೆ. ರಥಸಪ್ತಮಿಯ  ದಿನದಂದು ಹಾಲು ಉಕ್ಕಿಸುವ ಆಚರಣೆಯು ಕೆಲವೆಡೆ ಇದೆ. ಮತ್ತೆ ಕೆಲವರು ಹಾಲಿಗೆ ಸಕ್ಕರೆ ಅಥವಾ ಬೆಲ್ಲವನ್ನು ಬೆರೆಸಿ ಪಾಯಸ ಮಾಡಿ ಸೂರ್ಯದೇವನಿಗೆ ನೈವೇದ್ಯ ಅರ್ಪಿಸುತ್ತಾರೆ. ಹಿಂದಿನ ದಿನವಾದ ಷಷ್ಠೀ ದಿನದಂದು ಒಪ್ಪತ್ತು ಉಪವಾಸವಿದ್ದು, ಸಪ್ತಮೀ ದಿನ ಪೂರ್ಣ ಉಪವಾಸದ ವೃತವನ್ನು ಕೂಡ ಮಾಡುವರು.

ಸೂರ್ಯೋದಯ ಅಥವಾ ಸೂರ್ಯ ನೆತ್ತಿಯ ಮೇಲೆ ಬರುವ ಹೊತ್ತಿಗೆ ಸರಿಯಾಗಿ  ಹಾಲು ಉಕ್ಕಿಸುತ್ತಾರೆ . ಹೀಗೆ ಹಾಲು ಉಕ್ಕಿಸುವುದರಿಂದ ಮನೆಯು ಏಳಿಗೆಯಾಗುತ್ತದೆ. ಮತ್ತು ಸುಖ, ಸಂತೋಷ, ಆರೋಗ್ಯ, ಸಂಪತ್ತು, ಸಮೃದ್ದಿಯ ಸಂಕೇತವೆಂಬ ನಂಬಿಕೆಯೂ ಇದೆ. ಸೂರ್ಯದೇವನು ಮುನುಕುಲಕ್ಕೆ ಹಾಗೂ ಸಕಲ ಪಶುಪಕ್ಷಿ ಸಂಕುಲಕ್ಕೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ನೀಡುವ ಪರಮಾತ್ಮನಾಗಿದ್ದಾನೆ.

ಸೂರ್ಯ ಆರೋಗ್ಯದಾತ :

    ಸೂರ್ಯನು ಆರೋಗ್ಯದಾತನೆಂಬುದಾಗಿ ಆರೋಗ್ಯಂ ಭಾಸ್ಕರಾದಿಚ್ಚೇತ್ ಎಂದು ಋಗ್ವೇದವು ಅವನನ್ನು ಪ್ರಾರ್ಥಿಸಿದೆ. ವೇದಗಳು ಅಲ್ಲದೇ ಪುರಾಣಗಳೂ ಸಹ ಸೂರ್ಯನನ್ನು ರೋಗ ನಿವಾರಕನೆಂದು ಸಾರಿದೆ. ಸರ್ವವ್ಯಾಧಿಗಳೂ, ಮಹಾವ್ಯಾಧಿಗಳೂ ನಿವಾರಣೆಯಾಗುತ್ತದೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮನು ತಿಳಿಸಿರುತ್ತಾನೆ. ಪದ್ಮಪುರಾಣದಲ್ಲಿ ಭದ್ರೇಶ್ವರನೆಂಬ ರಾಜನು ಸೂರ್ಯಾರಾಧನೆಯಿಂದ ಶ್ವೇತಕುಷ್ಠ (ಬಿಳಿತೊನ್ನು) ರೋಗವನ್ನು ಪರಿಹರಿಸಿ ಕೊಂಡನೆಂಬ ಕಥೆಯೇ ಇದೆ. ಸೂರ್ಯಾರಾಧನೆ, ಸೂರ್ಯನಮಸ್ಕಾರಗಳಿಂದ ಕನಿಷ್ಠ ಪ್ರಯೋಜನಗಳೆಂದರೆ ಬಲಸಂವರ್ಧನೆ, ಆರೋಗ್ಯ, ಆಯುಷ್ಯಾಭಿವೃದ್ಧಿ, ಮನಃಶಕ್ತಿ ಸಂಚಯ, ಪ್ರಸನ್ನತೆ, ಉತ್ಸಾಹ, ಉಲ್ಲಾಸ ಮನಸ್ಸಿಗಾಗುತ್ತದೆ.

    ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಸೂರ್ಯನಾರಾಯಣ ಸ್ವಾಮಿ ದೇವಸ್ಥಾನವೂ ಸೇರಿದಂತೆ ನಮ್ಮ ದೇಶದಲ್ಲಿ ಸೂರ್ಯದೇವಾಲಯಗಳು, ಕೋನಾರ್ಕ್, ದಕ್ಷಿಣಾರ್ಕ, ಉನಾಪು, ಗೋಲ್ಪುರ, ಅರಸವಲ್ಲಿ ಮತ್ತು ಕುಂಭಕೋಣಂಗಳಲ್ಲಿರುವ ದೇವಾಲಯಗಳಲ್ಲಿ ರಥಸಪ್ತಮಿಯಂದು ವಿಶೇಷ ಅಲಂಕಾರ ಪೂಜೆಯೊಂದಿಗೆ ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ಪ್ರತಿ ವರ್ಷವೂ ಆಚರಿಸಲ್ಪಡುತ್ತದೆ.

- ಡಾ|| ರಾಘವೇಂದ್ರ ಗುರೂಜಿ,
ಪಿಹೆಚ್.ಡಿ., (ಬಂಗಾರದ ಪದಕ) ಸೆಬೋರ್ಗಾ ಯುರೋಫ್
ಅಂತಾರಾಷ್ಟ್ರೀಯ ಯೋಗಗುರುಗಳು. ದಾವಣಗೆರೆ


No comments:

Post a Comment