Friday, June 12, 2015

International Yoga Day 2015



ಭಾರತೀಯರ ಹೆಮ್ಮೆಯ ವಿಶ್ವ ಯೋಗ ದಿನಾಚರಣೆ
ಜೂನ್ 21, 2015
ಇಂದು ನಮಗೆ ಪರಿಚಿತವಿರುವ ಯೋಗ ಶಾಸ್ತ್ರವು ಸುಮಾರು ಹತ್ತು ಸಾವಿರ ವರ್ಷಗಳ ಹಿಂದಯೇ ಭಾರತದಲ್ಲಿ ತಾಂತ್ರಿಕ ನಾಗರೀಕತೆಯ ಅಂಗಗಳಲ್ಲಿ ಕಂಡುಬಂದಿರುತ್ತದೆ. ನಾಗರಿಕತೆಯ ಮೊದಲ ಹಂತದಲ್ಲಿ ಮಾನವನು ತನ್ನ ವಿಧಾನಗಳನ್ನು ಆಧ್ಯಾತ್ಮಿಕ ಅಂತಃಶಕ್ತಿಯನ್ನು ಅರಿತು ಅದನ್ನು ಅಭಿವೃದ್ಧಿಪಡಿಸುವ ವಿಧಾನಗಳನ್ನು ರೂಡಿಸಿಕೊಳ್ಳತೊಡಗಿದಾಗ ಯೋಗ ಪದ್ಧತಿಯು ಆರಂಭವಾಯಿತು. ಕ್ರಮೇಣ ಯೋಗ ವಿಜ್ಞಾನ ವಿಕಾಸಗೊಂಡಿತು. ಜಗತ್ತಿನಾದ್ಯಾಂತ ಪ್ರಾಚೀನ ಋಷಿಮುನಿಗಳು ಇದರ ಬೆಳವಣಿಗೆಗೆ ಕಾರಣೀಭೂತರಾದರು.

ಕ್ರಿ.ಪೂ. 3 ನೇ ಶತಮಾನದಲ್ಲಿ ಮುನಿ ಶ್ರೇಷ್ಠರಲ್ಲಿ ಒಬ್ಬರಾದ ಪತಂಜಲೀ ಮಹರ್ಷಿಯವರು ಯೋಗ ದರ್ಶನಕ್ಕೆ ರೂಪ ಕೊಟ್ಟ ತತ್ವಜ್ಞಾನಿ. ಪ್ರಾಚೀನ ಭಾರತದ ಪ್ರಮುಖ ಚಿಂತನ ಶೀಲ ವ್ಯಕ್ತಿಗಳಲ್ಲಿ ಪ್ರಾತಃಸ್ಮರಣೀಯರಾದ ಪತಂಜಲಿ ಮಹರ್ಷಿಯವರನ್ನು ಇಂದಿಗೂ ಯೋಗ ಪಿತಾಮಹರೆಂದು ಪೂಜಿಸುತ್ತೇವೆ.

ಈಗಿನ ಪಾಕಿಸ್ತಾನದಲ್ಲಿರುವ ಹರಪ್ಪ, ಮೊಹೆಂಜೋದಾರೋಗಳ ಸಿಂಧೂ ಕಣಿವೆಯಲ್ಲಿ ಪುರಾತತ್ವ ಉತ್ಖನನಗಳನ್ನು ಮಾಡಿದಾಗ ಶಿವ ಪಾರ್ವತಿಯರನ್ನು ಹೋಲುವ ಅನೇಕ ವಿಗ್ರಹಗಳು ದೊರಿತ್ತಿದ್ದು, ಈ ಮೂರ್ತಿಗಳ ವಿವಿಧ ಭಂಗಿಗಳು ಯೋಗಾಸನಗಳನ್ನು ಹಾಗೂ ಧ್ಯಾನದ ಭಂಗಿಗಳನ್ನು ನಿರೂಪಿಸಿರುತ್ತವೆ. ಈ ಅವಶೇಷಗಳು ದೊರೆತಂತಹ ಸಿಂಧೂ ಉಪ ಕಂಡದಲ್ಲಿ ಆರ್ಯ ಸಂಸ್ಕೃತಿಯು ಪ್ರವರ್ಧಮಾನಕ್ಕೆ ಬರುವ ಮೊದಲೇ ಅಂದರೆ ವೇದ ಪೂರ್ವ ಕಾಲದಲ್ಲಿ ಇದ್ದಂತಹ ಜನರಿಗೆ ಈ ಸಂಸ್ಕೃತಿಯು ಸಂಬಂಧಿಸಿದ್ದಾಗಿದೆ ಎಂದು ತಿಳಿದು ಬರುತ್ತದೆ. ನಮ್ಮ ಪುರಾಣ ಶಾಸ್ತ್ರಗಳ ಪ್ರಕಾರ ಯೋಗ ವಿದ್ಯೆಯ ಪ್ರವರ್ತಕ ಶಿವ ನೆಂಬುದಾಗಿ ತಿಳಿದು ಬರುತ್ತದೆ, ಪಾರ್ವತಿ ಶಿವನ ಪ್ರಥಮ ಶಿಷ್ಯೆಯಾಗಿದ್ದಳು ಎಂದು ತಿಳಿಸುತ್ತದೆ.

ವಸಿಷ್ಠ ಮಹರ್ಷಿಗಳು, ಮನಃ ಪ್ರಶಮನೋಪಾಯಃ ಯೋಗ ಇತ್ಯಭಿಧೀಯತೇ, ಅಂದರೇ ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗ ಎಂದು ಹೇಳಿರುತ್ತಾರೆ. ಯೋಗವು ಉತ್ತಮವಾಗಿ ಬದುಕುವುದಕ್ಕೆ ಸಂಬಂಧಿಸಿದ ಒಂದು ವಿಜ್ಞಾನ. ಆದ್ದರಿಂದ ಇದನ್ನು ದಿನ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬುದೇ ಇದರ ಉದ್ದೇಶವಾಗಿದೆ. ಯೋಗವು ಪ್ರತಿಯೊಬ್ಬ ವ್ಯಕ್ತಿಯ ಶಾರೀರಿಕ, ಮಾನಸಿಕ, ಭಾವನಾತ್ಮಾಕ, ಭೌತಿಕ ಹಾಗೂ ಆಧ್ಯಾತ್ಮಿಕ ಮೊದಲಾದ ಎಲ್ಲಾ ಅಂಶಗಳ ಮೇಲೂ ಪ್ರಭಾವ ಬೀರುವಂತಾಗಿದ್ದು ಮಾನವನ ಸರ್ವತೋಮುಖ ಅಭಿವೃದ್ಧಿಯಲ್ಲಿ ಇದರ ಪಾತ್ರ ಅತ್ಯಂತ ಪರಿಣಾಮಕಾರಿಯಾಗಿದೆ. ಸಮಗ್ರ ದೇಶದ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಪರಿಪೂರ್ಣ ಸಮನ್ವಯತೆ ಉಂಟು ಮಾಡುವುದು ಯೋಗದ ಉದ್ದೇಶವಾಗಿದೆ.

ನಮ್ಮ ದೇಶದ ಪ್ರಧಾನ ಮಂತ್ರಿ ಮಾನ್ಯ ಶ್ರೀ ನರೇಂದ್ರ ಮೋದಿಯವರು ಅತ್ಯಂತ ಕಳಕಳಿಯಿಂದ 2014ರ ಡಿಸೆಂಬರ್ 11ರಂದು UNGA ಅಂತರಾಷ್ಟ್ರೀಯ ಮಹಾಸಭೆಯಲ್ಲಿ ಜೂನ್ 21 ಅಂತಾರಾಷ್ಟ್ರೀಯ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲು ವಿಷಯ ಮಂಡಿಸಿದಾಗ ಅಮೇರಿಕಾ, ಕೆನಡಾ, ಫಾನ್ಸ್, ಜರ್ಮನಿ, ಇಟಲಿ, ಚೀನಾ, ಜಪಾನ್ ಸೇರಿದಂತೆ ಒಟ್ಟು 193 ಸದಸ್ಯರನ್ನೊಳಗೊಂಡ ಸಭೆಯಲ್ಲಿ 177ಕ್ಕೂ ಹೆಚ್ಚು ರಾಷ್ಟ್ರಗಳು ಅತ್ಯಂತ ಹರ್ಷದಿಂದ ಒಪ್ಪಿಗೆ ಸೂಚಿಸಿದವು. ಈ ಸಂದರ್ಭವು ನಮ್ಮ ಭಾರತೀಯರಿಗೆ ಅತ್ಯಂತ ಹೆಮ್ಮೆಯ ಹಾಗೂ ಹರ್ಷದಾಯಕವಾದ ವಿಷಯವಾಗಿದೆ. ಭಾರತೀಯ ಸನಾತನ ಯೋಗ ವಿದ್ಯೆಗೆ ಒಂದು ಪೂರ್ಣತೆಯನ್ನು ತಂದುಕೊಟ್ಟ ಹೆಗ್ಗಳಿಕೆ ನಮ್ಮ ಮಾನ್ಯ ಪ್ರಧಾನ ಮಂತ್ರಿಯವರಿಗೆ ಸಲ್ಲುತ್ತದೆ.

ಜೂನ್ 21, ಅಂತಾರಾಷ್ಟ್ರೀಯ ವಿಶ್ವಯೋಗ ದಿನಾಚರಣೆ ಆಯ್ಕೆಯ ವಿಶೇಷತೆ:
ಈ ದಿನವನ್ನು ಆಯ್ಕೆ ಮಾಡಲು ಕಾರಣ-
ಈ ದಿನವು ವಿಶೇಷವಾಗಿ ಬೇಸಿಗೆ ಆಯನ ಸಂಕ್ರಾಂತಿ (Summer Solstice Day) ಇಂದು ಭೌಗೋಳಿಕವಾಗಿ ಸೂರ್ಯನ ಪ್ರಖರತೆ ಅತ್ಯಂತ ಹೆಚ್ಚಾಗಿ ಭೂಮಿಯ ಮೇಲೆ ಕಾಣಿಸಿಕೊಳ್ಳಲಿದ್ದು, ವರ್ಷಕ್ಕೊಮ್ಮೆ ಮಾತ್ರ ಈ ದಿನದ ಅವಧಿಯು ಎಂದಿಗಿಂತಲೂ ಹೆಚ್ಚಾಗಿರುತ್ತದೆ. ಆದ್ದರಿಂದ ಈ ದಿನದಂದು ಅನೇಕ ರಾಷ್ಟ್ರಗಳಲ್ಲಿ ವಿಶೇಷ ಪ್ರಾಮುಖ್ಯತೆ (special significance) ಇರುತ್ತದೆ.
ಯೋಗ ಪರಂಪರೆಯಲ್ಲಿ ಅತೀಂದ್ರೀಯ ಶಕ್ತಿಯುಳ್ಳ ಸದ್ಗುರುಗಳು ಕಂಡುಕೊಂಡಂತೆ-ಬೇಸಿಗೆ ಆಯನ ಸಂಕ್ರಾಂತಿ ಎಂದು ಆದಿಯೋಗಿ (the first yogi) ಯು ಪೂರ್ವ ದಿಕ್ಕಿಗೆ ತಿರುಗಿ ತನ್ನ ನೇರದೃಷ್ಟಿಯನ್ನು ಸಪ್ತಋಷಿಗಳ (Seven Sages) ಮೇಲೆ ಇಟ್ಟ ದಿನವಾಗಿದ್ದು, ಇವರುಗಳು ಯೋಗ ವಿಜ್ಞಾನವನ್ನು ವಿಶ್ವದಾದ್ಯಂತ ಹರಡಿದರು ಎಂದು ಇತಿಹಾಸದಿಂದ ತಿಳಿಯಲಾಗಿದೆ. ಆದ್ದರಿಂದ ಈ ದಿನವು ಮಾನವ ಕೋಟಿಯ ಇತಿಹಾಸದಲ್ಲಿ (History of Humanity) ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಎಲ್ಲಾ ವಿಶೇಷತೆಗಳು ಇರುವ ಕಾರಣವಾಗಿ ಮಾನ್ಯ ಪ್ರಧಾನ ಮಂತ್ರಿಯವರು ಈ ದಿವಸವನ್ನೇ ಆಯ್ಕೆ ಮಾಡಿ ಭಾರತೀಯ ಸನಾತನ ಯೋಗ ವಿಜ್ಞಾನಕ್ಕೆ ವಿಶ್ವಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲು ಮನ್ನಣೆ ದೊರಕಿಸಿಕೊಟ್ಟಿರುವುದು ಭಾರತೀಯರ ಸೌಭಾಗ್ಯವೇ ಸರಿ.
ಬನ್ನಿ, ಯೋಗ-ಶಾಂತಿ ಮತ್ತು ಸೌಹಾರ್ದತೆಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಪ್ರಥಮ ವರ್ಷದ ಅಂತಾರಾಷ್ಟ್ರೀಯ ವಿಶ್ವಯೋಗ ದಿನಾಚರಣೆಯನ್ನು ಕೇವಲ ಸಾಂಕೇತಿಕವಾಗಿ ಆಚರಿಸದೇ ಭಾರತೀಯರೆಲ್ಲರೂ ಮನ-ಮನೆಗಳಲ್ಲಿ ಹಬ್ಬವಾಗಿ ಆಚರಿಸೋಣ.

|| ಆರೋಗ್ಯಂ ಭಾಸ್ಕರಾಧೀಚ್ಛೇತ್ ||
|| ಸರ್ವೇ ಜನಃ ಸುಖಿನೋಭವಂತುಃ ||

- ಡಾ|| ರಾಘವೇಂದ್ರ ಗುರೂಜಿ, 
ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗ ತಜ್ಞ , ದಾವಣಗೆರೆ

No comments:

Post a Comment