Sunday, August 12, 2012

TirukaShree State Award Ceremony


2012ರ ಪ್ರತಿಷ್ಟಿತ ತಿರುಕ ಶ್ರೀ ಗೌರವ ಪುರಸ್ಕಾರ ಪ್ರದಾನ
ಮನಸ್ಸಿನ ಕಡಿವಾಣ ಯೋಗದಿಂದ ಮಾತ್ರ ಸಾಧ್ಯ.
-       ಪೂಜ್ಯ ಶ್ರೀ ಶಿವಾನಂದ ಸ್ವಾಮೀಜಿ

ದಾವಣಗೆರೆ ಆ 12
ಎಲ್ಲವಕ್ಕೂ ಕಡಿವಾಣವಿದೆ ಆದರೆ ಮನಸ್ಸಿಗೆ ಮಾತ್ರ ಯಾವುದೇ ಕಡಿವಾಣ ಹಾಕುವುದು ಕಷ್ಟ ಸಾಧ್ಯ, ಮನಸ್ಸಿಗೆ ಕಡಿವಾಣವನ್ನು ಹಾಕಲು ಯೋಗದಿಂದ ಮಾತ್ರ ಸಾಧ್ಯ ಎಂದು ನಗರದ ಶ್ರೀ ಜಡೇಸಿದ್ದ ಶಿವಯೋಗೀಶ್ವರ ಶಾಂತಾಶ್ರಮದ ಪೂಜ್ಯ ಶ್ರೀ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಸಂಜೆ ನಗರದ ಆರ್.ಹೆಚ್. ಗೀತಾಮಂದಿರದಲ್ಲಿ ಆದರ್ಶ ಯೋಗ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ ಸಂಸ್ಮರಣೆ ನಿಮಿತ್ತ ೧೬ನೇ ವಾರ್ಷಿಕ ಉಚಿತ ಚೈತನ್ಯ ಯೋಗ ಶಿಬಿರದ ಸಮಾರೋಪ, ೨೦೧೨ರ ರಾಜ್ಯ ತಿರುಕ ಶ್ರೀ ಗೌರವ ಪುರಸ್ಕಾರ ಹಾಗು ಅಮೋಘ ಯಕ್ಷಗಾನ ನೃತ್ಯ ಕಲಾ ವೈಭವ ಸಮಾರಂಭದ ಸಾನ್ನಿದ್ಯ ವಹಿಸಿ ಮಾತನಾಡಿದರು.

ನಾವು ಆರೋಗ್ಯವಾಗಿರಬೇಕಾದರೆ ನಮ್ಮ ಶರೀರ ಮತ್ತು ಮನಸ್ಸು ಸಮತೋಲನದಲ್ಲಿರಬೇಕು, ಪತಂಜಲೀ ಮಹರ್ಷಿಗಳು ಹೇಳಿದ ೮ ಅಂಗಗಳ ಯೋಗಶಾಸ್ತ್ರ ಶರೀರ ಮತ್ತು ಮನಸ್ಸಿನ ಸಮತೋಲನವನ್ನು ಸಾಧಿಸುವ ಮಾರ್ಗ ತೋರಿಸುತ್ತದೆ. ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಒಳ್ಳೆಯ ಭಾವನೆಗಳನ್ನು ಮೂಡಿಸಿ ಆತ್ಮಶುದ್ಧಿಗೊಳಿಸುತ್ತದೆ ಎಂದರು.

ತಿರುಕ ಶ್ರೀ ಗೌರವ ಪುರಸ್ಕಾರವನ್ನು ಸ್ವೀಕರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್ನ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಪ್ರದಾನ ಕಾರ್ಯದರ್ಶಿ, ಯೋಗತಜ್ಞ, ಯೋಗ ಸಂಶೋಧಕ, .ಶಶಿಕಾಂತ್ ಜೈನ್ ಮಾತನಾಡಿ ಮನಸ್ಸು ಶಾಂತಿಯಿಂದ ಇದ್ದರೆ ಮುಖದಲ್ಲಿ ನಗುವನ್ನು ಕಾಣಬಹುದು.ಎಲ್ಲವನ್ನೂ ಖುಷಿಯಿಂದ ಅನುಭವಿಸಬೇಕು. ಸಕಾರಾತ್ಮಕ ಭಾವನೆಗಳಿಂದ ಆತ್ಮ ವಿಶ್ವಾಸವನ್ನು ಗಳಿಸಲು ಯೋಗ ಅತ್ಯಂತ ಸಹಕಾರಿ ಎಂದರಲ್ಲದೇ ಈ ಪುರಸ್ಕಾರವು ಶಾಂತಿವನ ಟ್ರಸ್ಟ್ ಹಾಗು ಡಾ|| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅರ್ಪಿತವಾಗಿದೆ ಎಂದು ಭಾವನಾತ್ಮಕವಾಗಿ ನುಡಿದರು. ಮುಧಿನ ವರ್ಷದಿಂದ ನಮ್ಮ ಸಂಸ್ಥೆಯ ಮೂಲಕ ನಾಡಿನ ಯೋಗ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶವನ್ನು ಹೊಂದಿದೆ ಎಂಧು ಪ್ರಕಟಿಸಿದರು.

ಮುಖ್ಯ ಅತಿಥಿಗಳಾಗಿ ಬಾಪೂಜಿ ವಿದ್ಯಾ ಸಂಸ್ಥೆಯ ಸದಸ್ಯೆ ಶ್ರೀಮತಿ ಕಿರುವಾಡಿ ಗಿರಿಜಮ್ಮ ಮಾತನಾಡಿ ರಾಘವೇಂದ್ರ ಗುರೂಜಿಯವರು ಸಾವಿರಾರು ಮಕ್ಕಳಿಗೆ ಯೋಗ ಶಿಕ್ಷಣವನ್ನು ನೀಡುತ್ತಿರುವುದು ಉತ್ತಮ ಸೇವೆ ಎಂದರಲ್ಲದೇ ಒಳ್ಳೆಯ ನಡತೆಯನ್ನು ಕಲಿಸುವ ವಿದ್ಯೆ ಎಂದರು, ಶಸ್ತ್ರ ಚಿಕಿತ್ಸಾ ತಜ್ಞ ಡಾ|| ಬಿ.ಎಸ್. ನಾಗಪ್ರಕಾಶ್ ಬೊಜ್ಜು ಮೈಯಿಂದ ಬಳಲುತ್ತಿರುವವರಿಗೆ ಆಧುನಿಕ ಶಸ್ತ್ರ ಚಿಕಿತ್ಸಾ ವಿಧಾನಗಳಿದ್ದರೂ ಕೂಡಾ ಯೋಗಕ್ಕೆ ಮೊರೆ ಹೋಗುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ಕಿವಿಮಾತನ್ನು ತಿಳಿಸುತ್ತಾ, ಮುಂದಿನ ವರ್ಷದ ತಿರುಕ ಶ್ರೀ ಪುರಸ್ಕಾರದ ಸಂಪೂರ್ಣ ವೆಚ್ಚವನ್ನು ನಾನು ಭರಿಸುತ್ತೇನೆ ಎಂದು  ಭರವಸೆ ನೀಡಿದರು. ಸೇವಾಕರ್ತ ವೀರೇಶ್ ಬೆಳಕೇರಿ, ಶಾಂತಿವನ ಟ್ರಸ್ಟ್ನ ಪ್ರದಾನ ಕಾರ್ಯದರ್ಶಿ ಸೀತಾರಾಮ್ ತೋಳ್ಪಡಿತ್ತಾಯ ಮಾತನಾಡಿದರು.

ಪ್ರಾರಂಭದಲ್ಲಿ ಶಿವಯೋಗಿ ಹಿರೇಮಠ್ ರಚಿಸಿದ ಗುರುನಮನ ಗೀತೆಯನ್ನು ಗಾಯಕರಾದ ಜಗದೀಶ್ ಹಿರೇಮಠ್ ಸಂಗೀತ ಸಂಯೋಜಿಸಿ ಸಂಗಡಿಗರೊಂದಿಗೆ ಹಾಡಿದರು, ಯೋಗ ಶಿಕ್ಷಕ ಶಂಭುಲಿಂಗಯ್ಯ ಹಿರೇಮಠ್ ಎಲ್ಲರನ್ನೂ ಸ್ವಾಗತಿಸಿದ ನಂತರ ಡಾ|| ರಾಘವೇಂದ್ರ ಗುರೂಜಿ ಪ್ರಸ್ತಾವನೆ ಸಲ್ಲಿಸಿದರು, ಪುರಸ್ಕೃತರ ಪರಿಚಯ, ಸನ್ಮಾನ ಪತ್ರ ವಾಚನದೊಂದಿಗೆ ಯೋಗ ಶಿಕ್ಷಕ ವಿ.ಲಲಿತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ್ ಸಿ. ಕಣಕುಪ್ಪಿ ಕೊನೆಯಲ್ಲಿ ಎಲ್ಲರನ್ನೂ ವಂದಿಸಿದ ನಂತರ ನಾಡಿನ ಸುಪ್ರಸಿದ್ಧ ಬಣ್ಣದ ವೇಷದ ಯಕ್ಷಗಾನ ಕಲಾವಿದ ಜಗನ್ನಾಥ ಆಚಾರಿ ಯಳ್ಳಂಪಳ್ಳಿ ಹಾಗು ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ಲಕ್ಷ್ಮಣ ಭಂಡಾರಿ ಹೊಸಂಗಡಿ ಇವರ ತಂಡದಿಂದ ಅಮೋಘ ಯಕ್ಷಗಾನ ನೃತ್ಯ ಕಲಾ ವೈಭವ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು




No comments:

Post a Comment