-ಡಾ|| ರಾಘವೇಂದ್ರ ಗುರೂಜಿ
ದಾವಣಗೆರೆ ಜ.೨೧
ಚಂಚಲಯುಕ್ತವಾದ ಮನಸ್ಸನ್ನು ಸರಿದಾರಿಗೆ ಕೊಂಡೊಯ್ದು,ಶಾರೀರಿಕ ಮತ್ತು ಮಾನಸಿಕ ಸ್ಥಿತಿಯನ್ನು ಹದಗೊಳಿಸಿ ಮಾನಸಿಕ ಸ್ಥಿರತೆಯೊಂದಿಗೆ ಭಾವನಾತ್ಮಕ ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗ ವಿಜ್ಞಾನ ಎಂದು ಆದರ್ಶ ಯೋಗ ಪ್ರತಿಷ್ಠಾನ (ರಿ) ದಾವಣಗೆರೆಯ ಯೋಗಗುರು ಡಾ|| ಯೋಗಾಚಾರ್ಯ ಶ್ರೀ ರಾಘವೇಂದ್ರ ಗುರೂಜಿ ತಿಳಿಸಿದರು.
ಅವರು ಇಂದು ಬೆಳಿಗ್ಗೆ ನಗರದ ದೇವರಾಜ ಅರಸ್ ಬಡಾವಣೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ಡೈಮಂಡ್ ಜ್ಯುಬಿಲಿ ವಿದ್ಯಾಪೀಟದ ಆರ್.ವಿ.ಜಿ.ಕೆ ಪ್ರೌಢಶಾಲೆಯಲ್ಲಿ,ಬರುವ ಫೆಬ್ರವರಿಯಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಮ್ಮೇಳನದ ಅಂಗವಾಗಿ,ಪೂರ್ವ ಸಮ್ಮೇಳನದಲ್ಲಿ ಶಾಲಾಮಕ್ಕಳಿಗಾಗಿ ಶೈಕ್ಷಣಿಕ ಸಂವರ್ಧನೆಗಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಸಮಗ್ರ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣವು ಸಹಕಾರಿಯಾದರೆ ಯೋಗವಿಜ್ಞಾನದಿಂದ ಚತುರ್ಮುಖ ಪ್ರಜ್ಞೆಯಾದ ನಾಗರಿಕ ಪ್ರಜ್ಞೆ,ರಾಷ್ಟ್ರ ಪ್ರೇಮ,ಸೇವಾಭಾವ,ಆಧ್ಯಾತ್ಮ ಚಿಂತನೆ,ಇವುಗಳ ಅರಿವು ಉಂಟಾಗಿ ಉತ್ತಮವಾಗಿ ಬದುಕಲು ಕಲಿಸುತ್ತದೆ ಶಿಕ್ಷಣದ ಜೊತೆಗೆ ಯೋಗಾಭ್ಯಾಸವನ್ನು ರೂಡಿಸಿಕೊಂಡರೆ ಶೈಕ್ಷಣಿಕ ಪ್ರಗತಿಯನ್ನು ಕಾಣಬಹುದು ಎಂದರಲ್ಲದೇ,ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಕಲೆ,ಏಕಾಗ್ರತೆ,ನೆನಪಿನ ಶಕ್ತಿ,ಸದೃಢವಾದ ದೈಹಿಕ ಬೆಳವಣಿಗೆ,ಮಾನಸಿಕ ಶಾಂತಿ ಇವುಗಳನ್ನಿ ಯೋಗ ಚಟುವಟಿಕೆಯ ಮೂಲಕ ಹೇಗೆ ಉಪಯೋಗ ಪಡೆದುಕೊಳ್ಳಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.
ಈ ಸಂದರ್ಭದಲ್ಲಿ ಯೋಗಸಾಧಕ ಶಂಭುಲಿಂಗಯ್ಯ ಹಿರೇಮಠ್‌ರವರು,ಸೂರ್ಯನಮಸ್ಕಾರದೊಂದಿಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಉತ್ಕಟಾಸನ,ಶಶಂಕಾಸನ,ವಕ್ರಾಸನ,ಪವನ ಮುಕ್ತಾಸನ,ಸರ್ವಾಂಗಾಸನ,ಶೀರ್ಷಾಸನ,ಮಯೂರಾಸನ ಮುಂತಾದವುಗಳನ್ನು ಪ್ರದರ್ಶಿಸಿ ಮಕ್ಕಳಿಗೆ ಆಸಕ್ತಿ ಹುಟ್ಟಿಸಿದರು.
ಅಧ್ಯಕ್ಷತೆಯನ್ನು ಕಾಸಲ್ ಎಸ್.ವಿಠ್ಠಲ್ ವಹಿಸಿ,ಯೋಗಾಭ್ಯಾಸವು ಮಕ್ಕಳ ಮನಸ್ಸಿನ ಮೇಲೆ ಅತ್ಯಂತ ಪ್ರಭಾವ ಬೀರುವ ವಿದ್ಯೆ,ಇದನ್ನು ರೂಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕೆ.ಎನ್ ಅನಂತರಾವ್ ಶ್ರೇಷ್ಠಿ,ಜೆ.ವಿ.ಗೋಪಾಲಕೃಷ್ಣ,ಹಾಲಪ್ಪ,ಮುಖ್ಯೋಪಾಧ್ಯಾಯರಾದ ಹರೀಶ್ ಡಿ.ಹೆಚ್,ಮಹೇಶ್ ಪಿ.ಎಲ್,ಶ್ರೀಮತಿ ಶಾರದಾ ಹಿರೇಮಠ್ ಇವರು ವೇದಿಕೆಯಲ್ಲಿ ಉಪಸ್ತಿತರಿದ್ದರು. ಪ್ರಾರಂಭದಲ್ಲಿ ಸಹ ಶಿಕ್ಷಕಿ ಶಿಲ್ಪಾ ಎನ್.ವಿ ಪ್ರಾರ್ಥಿಸಿದಾಗ,ಹರೀಶ್ ಡಿ.ಹೆಚ್ ಎಲ್ಲರನ್ನು ಸ್ವಾಗತಿಸಿದರು,ಸಹಶಿಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು ೫೦೦ಕ್ಕೂ ಹೆಚ್ಚು ಶಾಲಾಮಕ್ಕಳು ಭಾಗವಹಿಸಿದ್ದರು.
No comments:
Post a Comment